ಕೊಕ್ಕರೆ

	ಗ್ರೂಯಿಫಾರ್ಮೀಸ್ ಗಣದ ಗ್ರೂಯಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು (ಕ್ರೇನ್). ದಕ್ಷಿಣ ಅಮೆರಿಕ, ಮಲಯ ದ್ವೀಪ ಸಮೂಹ, ಪೆಸಿಫಿಕ್ ದ್ವೀಪಗಳು ಮತ್ತು ನ್ಯೂಜಿóೀಲೆಂಡ್‍ಗಳನ್ನು ಬಿಟ್ಟು ಪ್ರಪಂಚದ ಉಳಿದೆಲ್ಲ ಪ್ರದೇಶಗಳಲ್ಲೂ ಕೊಕ್ಕರೆಗಳಿವೆ. ಭಾರತದಲ್ಲಿ ಕಾಣ ಬರುವ ಗ್ರಸ್ ಆಂಟಿಗೋನ್ (ಸಾರಸ), ಸೈಬೀರಿಯದಲ್ಲಿನ ಗ್ರಸ್ ಗ್ರಸ್ ಲಿಲ್‍ಫೋರ್ಡಿ (ಸಾಮಾನ್ಯ ಕೊಕ್ಕರೆ), ಯೂರೋಪ್ ಮತ್ತು ಮಧ್ಯ ಏಷ್ಯಗಳ ಮೂಲವಾಸಿಯಾದ ಆಂತ್ರೊಪಾಯ್ಡಿಸ್ ವರ್ಗೊ (ಡೆಮಾಯ್ಸೆಲ್ ಕೊಕ್ಕರೆ), ಉತ್ತರ ಅಮೆರಿಕದಲ್ಲಿನ ಗ್ರಸ್ ಕೆನಡೆನ್ಸಿಸ್ ಮತ್ತು ಗ್ರಸ್ ಅಮೆರಿಕಾನ (ಹೂಪಿಂಗ್ ಕ್ರೇನ್), ಆಫ್ರಿಕದಲ್ಲಿ ಕಾಣಬರುವ ಬಾಲಿಯೇರಿಕ ಪ್ಯಾವೊಲಿನ (ಕಿರೀಟಿ ಕೊಕ್ಕರೆ) ಮುಂತಾದವು ಮುಖ್ಯ ಬಗೆಯ ಕೆಲವು ಕೊಕ್ಕರೆಗಳು. ಡೆಮಾಯ್ಸೆಲ್ ಕೊಕ್ಕರೆ ಮತ್ತು ಸಾಮಾನ್ಯ ಕೊಕ್ಕರೆಗಳು ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತವೆ.

	ಬತ್ತದ ಗದ್ದೆಗಳು, ಜೌಗುಭೂಮಿ, ಬಯಲುಪ್ರದೇಶ ಮುಂತಾದೆಡೆಯಲ್ಲೆಲ್ಲ ಕೊಕ್ಕರೆಗಳು ವಾಸಿಸುತ್ತವೆ. ಎಲ್ಲ ಬಗೆಯ ಕೊಕ್ಕರೆಗಳೂ ದೊಡ್ಡಗಾತ್ರದ ಹಕ್ಕಿಗಳು. ಉದ್ದವಾದ ಕಾಲುಗಳು ಹಾಗೂ ಕತ್ತು, ಮೋಟಾದ ಮತ್ತು ಅಗಲವಾದ ತೋಕೆ, ವಿಸ್ತಾರವಾದ ರೆಕ್ಕೆಗಳು, ಮೋಟಾದ ಮತ್ತು ಕಾಲಿನ ಉಳಿದೆಲ್ಲ ಬೆರಳುಗಳಿಗಿಂತ ಕೊಂಚ ಎತ್ತರದಲ್ಲಿರುವ ಕಿರುಬೆರಳು-ಇವು ಕೊಕ್ಕರೆಗಳ ಮುಖ್ಯ ಲಕ್ಷಣಗಳು, ಹಾರುವಾಗ ಕತ್ತನ್ನು ನೇರವಾಗಿ ಮುಂದಕ್ಕೂ ಕಾಲುಗಳನ್ನು ನೇರವಾಗಿ ಹಿಂದಕ್ಕೂ ಚಾಚಿರುವುದು ಕೊಕ್ಕರೆಗಳ ಇನ್ನೊಂದು ವಿಶೇಷ ಲಕ್ಷಣ. ಕೊಕ್ಕರೆಗಳ ಟ್ರೇಕಿಯ (ವಿಂಡ್ ಪೈಪ್) ಅಥವಾ ಗಾಳಿಕೊಳವೆಯೂ ಕಹಳೆಯ ಸುರುಳಿಗಳಂತೆ ಹಲವಾರು ಬಾರಿ ಸುತ್ತಿಕೊಂಡಿದ್ದು ಬೇರಾವ ಹಕ್ಕಿಗಳ ಟ್ರೇಕಿಯಕ್ಕಿಂತ ಭಿನ್ನವಾದುದೂ ವಿಚಿತ್ರವಾದುದೂ ಆಗಿದೆ. ಕೆಲವು ಪ್ರಭೇದಗಳಲ್ಲಿ ಇದು ಎದೆಮೂಳೆಯನ್ನೂ ಹಾರಲು ನೆರವಾಗುವ ಸ್ನಾಯುಗಳನ್ನೂ ಭೇದಿಸಿರುವುದುಂಟು. ಕೊಕ್ಕರೆಗಳು ಹಾರುತ್ತಿರುವಾಗಲೂ ನೆಲದ ಮೇಲಿರುವಾಗಲೂ ಮಾಡುವ ಕಹಳೆ ಶಬ್ದದಂಥ ಅನುರಣಿತ ಕೂಗಿಗೆ ಈ ರೀತಿಯ ಗಾಳಿಕೊಳವೆಯೇ ಕಾರಣ.  ಬಹುಪಾಲು ಬಗೆಯ ಕೊಕ್ಕರೆಗಳು ಗುಂಪುಗಳಲ್ಲಿಯೇ ವಾಸಿಸುತ್ತವೆ.  ಭಾರತದ ಸಾರಸಗಳಲ್ಲಿ ಒಂದು ವಿಶೇಷ ಗುಣವನ್ನು ಕಾಣಬಹುದು.  ಇವುಗಳಲ್ಲಿ ಒಂದು ಗಂಡು ಒಂದೇ ಒಂದು ಹೆಣ್ಣನ್ನು ತನ್ನ ಸಂಗಾತಿಯಾಗಿ ಆರಿಸಿಕೊಂಡು ಅದರೊಡನೆ ತನ್ನ ಜೀವಮಾನವನ್ನೆಲ್ಲ ಕಳೆಯುತ್ತದೆ. ಕೊಕ್ಕರೆಗಳಲ್ಲಿ ವಲಸೆಹೋಗುವ ಪರಿಪಾಠವಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ತಮ್ಮ ಮೂಲನೆಲೆಯನ್ನು ಬಿಟ್ಟು ಉಷ್ಣಪ್ರದೇಶಗಳಿಗೆ ದೊಡ್ಡ ದೊಡ್ಡ ಗುಂಪುಗಳಲ್ಲಿ ಹಾರಿ ಹೋಗುತ್ತವೆ. ವಲಸೆಹೋಗುವಾಗ ಇಲ್ಲವೆ ದೈನಂದಿನ ಹಾರುವಿಕೆಯಲ್ಲಿ ವಿಶಿಷ್ಟವಾದ ಹಾಗೂ ರಮಣೀಯವಾದ ಗಿ- ಆಕಾರದ ಸರಪಳಿಯಂತೆ ಹಾರುತ್ತವೆ.  ಈ ಚಿಹ್ನೆಯ ಮುಂತುದಿಯಲ್ಲಿ ಗುಂಪಿನ ನಾಯಕ ಇರುತ್ತದೆ. ಕೊಕ್ಕರೆಗಳು ಆಕಾಶದಲ್ಲಿ ಬಹಳ ಎತ್ತರದಲ್ಲಿ (ಕೆಲವೊಮ್ಮೆ 2 ಮೈಲಿಗೂ ಎತ್ತರದಲ್ಲಿ) ಹಾರುವುವಲ್ಲದೆ ಹಾರುವಾಗ ಕ್ರಮಬದ್ಧವಾಗಿಯೂ ಗಂಭೀರವಾಗಿಯೂ ರೆಕ್ಕೆಗಳನ್ನು ಬಡಿಯುತ್ತ ಮುಂಬರಿಯುತ್ತವೆ.

	ಕೊಕ್ಕರೆಗಳ ಆಹಾರ ವೈವಿಧ್ಯಪೂರ್ಣ, ಕೀಟ ಮತ್ತು ಅವುಗಳ ಡಿಂಬ, ಹುಳು ಹುಪ್ಪಟೆಗಳು, ಬಸವನ ಹುಳುಗಳು, ಕಪ್ಪೆ, ಹಲ್ಲಿಗಳು, ಸಣ್ಣಪುಟ್ಟ ಹಕ್ಕಿಗಳು, ಕೆಲವೊಮ್ಮೆ ಸಣ್ಣಗಾತ್ರದ ಸಸ್ತನಿಗಳು ಮುಂತಾದ ಮಾಂಸಾಹಾರವನ್ನೂ ಕಾಳು, ಹಣ್ಣು, ಎಳೆಯ ಚಿಗುರು, ಬೇರು ಮುಂತಾದ ಸಸ್ಯಾಹಾರವನ್ನೂ ಇವು ಸೇವಿಸುತ್ತವೆ.  ಸಸ್ಯಾಹಾರವೇ ಇವುಗಳ ಮೆಚ್ಚಿನ ಆಹಾರ. ಮೀನುಗಳನ್ನು ತಿನ್ನುವುದು ಕಡಿಮೆ.  ತಮ್ಮ ಬಲವಾದ ಕೊಕ್ಕಿನಿಂದ ನೆಲವನ್ನು ಹೆಕ್ಕಿ ಬೇರು, ಹುಳು ಮುಂತಾದವನ್ನು ಆಯ್ದು ತಿನ್ನುತ್ತ ಸಾಗುವುದೇ ಇವುಗಳ ಆಹಾರ ಸೇವನೆಯ ಕ್ರಮ, ಒಣ ನೆಲದಲ್ಲಿ ಆಹಾರವನ್ನು ಅರಸುತ್ತಿರುವಾಗ ಆಗಿಂದಾಗ್ಗೆ ಇವು ಹತ್ತಿರದಲ್ಲಿನ ನೀರಿನ ನೆಲೆಗೆ ಹಾರಿಹೋಗಿ ನೀರು ಕುಡಿಯುತ್ತವೆ.

	ಕೊಕ್ಕರೆಗಳ ಅತ್ಯಂತ ಕೌತುಕಮಯ ಹಾಗೂ ಆಕರ್ಷಕ ಪದ್ಧತಿ ಎಂದರೆ ನೃತ್ಯಾಚರಣೆ. ಆಗಿಂದಾಗ್ಗೆ ಹಲವಾರು ಕೊಕ್ಕರೆಗಳು ಗುಂಪುಗೂಡಿಕೊಂಡು ರೆಕ್ಕೆಗಳನ್ನು ಅರ್ಧ ವಿಸ್ತರಿಸಿ ಲಘು ಹೆಜ್ಜೆ ಹಾಕುತ್ತ ಒಂದರ ಸುತ್ತ ಇನ್ನೊಂದು ಕುಣಿಯುತ್ತವೆ. ನಡುನಡುವೆ ಕಾಲುಗಳನ್ನು ನೀಳವಾಗಿ ಚಾಚಿಕೊಂಡು ಮೇಲಕ್ಕೆ ನೆಗೆಯುತ್ತವೆ. ದೇಹವನ್ನು ಉದ್ದಕ್ಕೆ ಚಾಚುವುದು ಮತ್ತೆ ಬಾಗಿಸುವುದು ಮುಂತಾಗಿ ವಿಚಿತ್ರಗತಿಯಲ್ಲಿ ನರ್ತಿಸುತ್ತವೆ. ಅಲ್ಲದೆ, ಹುಲ್ಲಿನ ಎಸಳನ್ನೊ ಇಲ್ಲವೆ ಕಡ್ಡಿಗಳನ್ನೊ ಕೊಕ್ಕಿನಿಂದ ಹಿಡಿದು ಗಾಳಿಯಲ್ಲಿ ತೂರಿ ಅದು ಕೆಳಕ್ಕೆ ಬೀಳುತ್ತಿರುವಾಗ ಕೊಕ್ಕಿನಿಂದ ಹೊಡೆಯುವುದೂ ಉಂಟು. ಈ ವಿಚಿತ್ರ ಬಗೆಯ ನೃತ್ಯವನ್ನು ಬೆದೆಗಾಲದಲ್ಲಿ ಮಾತ್ರವಲ್ಲದೆ ವರ್ಷದ ಯಾವ ಕಾಲದಲ್ಲಾದರೂ ಪ್ರದರ್ಶಿಸಬಹುದು. ಇದು ಕೊಕ್ಕರೆಗಳ ಭಾವಪ್ರದರ್ಶನವೊ ಇಲ್ಲವೆ ತೃಪ್ತಿ ಮತ್ತು ಸಂತೋಷಗಳ ಸೂಚನೆಯೊ ಆಗಿರಬಹುದೆಂದು ಹಲವರ ಅಭಿಪ್ರಾಯ.

	ಕೊಕ್ಕರೆಗಳು ಜೌಗುಭೂಮಿಯಲ್ಲಿ ನೀರಿನಿಂದ ಆವೃತವಾದ ಸಣ್ಣ ಸಣ್ಣ ಜೊಂಡಿನ ಪೊದೆಗಳಲ್ಲಿ ಗೂಡುಕಟ್ಟುತ್ತವೆ. ಹೆಣ್ಣು ವರ್ಷಕ್ಕೊಂದು ಬಾರಿ 2 ಮೊಟ್ಟೆಗಳನ್ನಿಡುತ್ತದೆ. ಅಪರೂಪಕ್ಕೆ 1 ಇಲ್ಲವೆ 3 ಮೊಟ್ಟೆಗಳನ್ನೂ ಇಡಬಹುದು. ಮೊಟ್ಟೆಗಳ ಬಣ್ಣ ಮಾಸಲು ಬಿಳಿ ಇಲ್ಲವೆ ಕಂದು. ಮೇಲೆಲ್ಲ ಕಗ್ಗಂದು ಬಣ್ಣದ ಚುಕ್ಕೆಗಳಿವೆ. ಗೂಡು ಕಟ್ಟುವ ಮತ್ತು ಕಾವುಕೂತು ಮರಿ ಮಾಡಿ ಅವುಗಳನ್ನು ಪಾಲಿಸುವ ಕಾರ್ಯಗಳನ್ನು ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಸಹಕರಿಸಿ ಮಾಡುತ್ತವೆ. ಸುಮಾರು 28-35 ದಿನಗಳ ಅನಂತರ ಮೊಟ್ಟೆಗಳೊಡೆದು ಮರಿಗಳು ಹೊರಬರುತ್ತವೆ. ಸುಮಾರು 10 ವಾರಗಳಾದ ಮೇಲೆ ಅವು ಹಾರಲು ಶಕ್ತವಾಗುತ್ತವೆ.

	ಕೊಕ್ಕರೆಗಳು ದೀರ್ಘಾಯುಷಿಗಳೆಂದು ಹೆಸರಾಗಿವೆ.  ಇವು 100 ವರ್ಷಗಳಿಗೂ ಮೇಲ್ಪಟ್ಟು ಬದುಕುವುವೆಂದು ನಂಬಿಕೆಯಿದೆ.  ಬಹುಶಃ ನಿಜವಾಗಿ ಇಷ್ಟು ದೀರ್ಘಕಾಲ ಜೀವಿಸಿರದಿದ್ದರೂ ವಾಷಿಂಗ್‍ಟನ್ ಪ್ರಾಣಿಸಂಗ್ರಹಾಲಯದಲ್ಲಿರುವ ಕೊಕ್ಕರೆಯೊಂದಕ್ಕೆ ಇತ್ತೀಚೆಗೆ 55 ವರ್ಷ ವಯಸ್ಸಾಯಿತು ಎಂದು ಹೇಳಲಾಗಿದೆ.  ಜಪಾನಿನಲ್ಲಂತೂ ಕೊಕ್ಕರೆಯನ್ನು ದೀರ್ಘಾಯುಷ್ಯದ ಸಂಕೇತವೆಂದು ಭಾವಿಸುತ್ತಾರೆ.  ಕೊಕ್ಕರೆ 1,000 ವರ್ಷ ಬದುಕುತ್ತದೆ ಎಂಬ ನಂಬಿಕೆ ಜಪಾನೀಯರಲ್ಲಿದೆ. ಭಾರತದಲ್ಲಿ ಕಾಣಬರುವ ಕೊಕ್ಕರೆಗಳ ಸ್ಥೂಲವಿವರಣೆಯನ್ನು ಕೆಳಗೆ ಕೊಡಲಾಗಿದೆ.

	1 ಗ್ರಸ್ ಆಂಟಿಗೋನ್ (ಸಾರಸ): ಎತ್ತರ 4(5(. ಮೈಬಣ್ಣ ಬೂದಿ. ಕಾಲು, ತಲೆ ಮತ್ತು ಕತ್ತಿನ ಮೇಲ್ಭಾಗ ಕೆಂಪು. ಹೊಲಗದ್ದೆಗಳ ಬಳಿಯೇ ಇದರ ವಾಸ.

	2 ಗ್ರಸ್ ಗ್ರಸ್ ಲಿಲ್‍ಫೋರ್ಡಿ (ಸಾಮಾನ್ಯ ಕೊಕ್ಕರೆ): ಚಳಿಗಾಲದಲ್ಲಿ ಉತ್ತರ ಯೂರೋಪಿನಿಂದ ಸೆಪ್ಟೆಂಬರ್ ವೇಳೆಗೆ ವಲಸೆ ಬರುತ್ತದೆ. ಎತ್ತರ ಸುಮಾರು 4(. ಮೈಬಣ್ಣ ಬೂದಿ. ತಲೆ ಮತ್ತು ಕತ್ತು ಕಪ್ಪುಬಣ್ಣಕ್ಕಿದ್ದರೂ ನೆತ್ತಿಯ ಮೇಲೆ ಕೆಂಪು ಬಣ್ಣದ ಗುರುತಿದೆ.

	3 ಆಂತ್ರೊಪಾಯ್ಡಿಸ್ ವರ್ಗೊ (ಡೆಮಾಯ್ಸೆಲ್ ಕೊಕ್ಕರೆ): ಇದೂ ಕೂಡ ಚಳಿಗಾಲದಲ್ಲಿ ಯೂರೋಪಿನಿಂದ ವಲಸೆಬರುತ್ತದೆ. ನೋಡುವುದಕ್ಕೆ ಸಾಮಾನ್ಯ ಕೊಕ್ಕರೆಯಂತೆ ಕಂಡರೂ ಅಷ್ಟು ದೊಡ್ಡ ಗಾತ್ರದ್ದಲ್ಲ; ಇದರ ಎತ್ತರ ಸುಮಾರು 3(. ನೆತ್ತಿಯ ಮೇಲೆ ಕೆಂಪು ಬಣ್ಣದ ಗುರುತಿಲ್ಲ. ಕಣ್ಣಿನ ಹಿಂಭಾಗದಲ್ಲಿ ಬಿಳಿಯ ಬಣ್ಣದ ಕುಚ್ಚುಗಳಿವೆ. ಕತ್ತಿನ ಕೆಳಭಾಗದಲ್ಲಿನ ಪುಕ್ಕಗಳು ಉದ್ದವಾಗಿದ್ದು ಎದೆಯ ಮೇಲೆ ಇಳಿಬೀಳುತ್ತವೆ.
(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ